ಕತ್ತಿ ಮೀನು : ಕ್ಸಿಫಿಯಿಡೆ ಕುಟುಂಬದ ಕ್ಸಿಫಿಯಾಸ್ ಗ್ಲೇಡಿಯಸ್ ಎಂಬ ವೈಜ್ಞಾನಿಕ ಹೆಸರಿನ ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮೀನು. ಉದ್ದವಾದ ಕತ್ತಿಯಾಕಾರದ ಮೂತಿಯೂ ಬೆನ್ನಿನ ಮೇಲಿರುವ ಎತ್ತರವಾದ ರೆಕ್ಕೆಯೂ ಹಲ್ಲುಗಳಿಲ್ಲದ ಬಾಯಿಯೂ ಮೈಮೇಲೆ ಹುರುಪೆಗಳಿಲ್ಲದಿರುವುದೂ ಈ ಮೀನಿನ  ವಿಶಿಷ್ಟ ಲಕ್ಷಣಗಳು. ಇದು ಉದ್ದದಲ್ಲಿ ಸು. 4.5 ಮೀ ಇದೆ. ತೂಕ 1,000 ಪೌಂಡ್ ಇರುವುದೂ ಉಂಟು. ಇದರ ಮೂತಿಯ ಉದ್ದ ಸು. ಕೆಲವೊಮ್ಮೆ ದೇಹದ ಉದ್ದದ ಮೂರನೇ ಒಂದು ಭಾಗ ಇರುತ್ತದೆ. ಬಹು ವೇಗವಾಗಿ ಈಜಬಲ್ಲ ಕತ್ತಿಮೀನು ಇತರ ಸಣ್ಣ ಮೀನುಗಳ ತಂಡದ ಮೇಲೆ ಹಟಾತ್ತನೆ ಧಾಳಿ ಮಾಡಿ ತನ್ನ ಕತ್ತಿಯಂತ ಮೂತಿಯಿಂದ ಅವನ್ನು ಊನಮಾಡಿ ಅನಂತರ ಒಂದೊಂದನ್ನಾಗಿ ನುಂಗುತ್ತದೆ. ನೀರಿನ ಮೇಲ್ಮೈಯಿಂದ ಹಿಡಿದು ಸು. 183 ಮೀ ಗಳಷ್ಟು ಆಳದಲ್ಲೂ ಆಹಾರಕ್ಕಾಗಿ ಬೇಟೆಯಾಡುತ್ತ ಸರಾಗವಾಗಿ ಈಜುತ್ತಿರುತ್ತದೆ. ಕೆಲವೊಮ್ಮೆ ಸಣ್ಣ ಹಡಗುಗಳ ತಳಭಾಗವನ್ನು ಮೂತಿಯಿಂದ ಹೊಡೆದು ಕತ್ತರಿಸುವುದೆಂದು ಹೇಳುತ್ತಾರೆ. 

ಕತ್ತಿಮೀನು ಒಳ್ಳೆಯ ಆಹಾರದ ಮೀನೆಂದು ಹೆಸರಾಗಿದೆ. ಇದರ ಮಾಂಸದಲ್ಲಿ ಪ್ರೋಟೀನಿನ ಅಂಶ ಅಧಿಕವಾಗಿರುವುದರಿಂದ ಬಹು ಪುಷ್ಟಿಕರವಾದ ಆಹಾರವೆನಿಸಿದೆ. ಬೆಸ್ತರು ಹಿಡಿಯುವ ಹಲವಾರು ಬಗೆಯ ಮೀನುಗಳಲ್ಲಿ ಇದು ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುದು.

ಇವು ಬೇಸಿಗೆಯಲ್ಲಿ ಶೀತ ವಲಯದೆಡೆಗೆ ವಲಸೆಹೋಗುತ್ತವೆ ಹಾಗೂ ಛಳಿಗಾಲದಲ್ಲಿ ಮತ್ತೆ ಹಿಂತಿರುಗುತ್ತವೆ. ವಸಂತದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.			(ಆರ್.ಎಲ್.; ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ